ಬೆಲೊ, ಸಾಲ್
1915, ಅಮೆರಿಕದ ಕಾದಂಬರಿಕಾರ. ರಷ್ಯದಿಂದ ಕೆನಡಾಕ್ಕೆ ಬಂದು ನೆಲಸಿದ ಕುಟುಂಬವೊಂದರಲ್ಲಿ ಹುಟ್ಟಿದ. ಷಿಕಾಗೊ ಮತ್ತು ನಾರ್ತ್‍ವೆಸ್ಟರ್ನ್ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿದ. 1944ರಲ್ಲಿ ಪ್ರಕಟವಾದ ಡ್ಯಾಂಗ್ಲಿಂಗ್ ಮ್ಯಾನ್ ಈತನ ಮೊದಲ ಕಾದಂಬರಿ. 1976ರಲ್ಲಿ ಇವನಿಗೆ ನೊಬೆಲ್ ಪ್ರಶಸ್ತಿ ಬಂದಿತು. ದೈನಂದಿನ ಬದುಕಿನಾಚೆ ನಿಂತು ವಿಚಾರ ಪರನಾಗುವ ವ್ಯಕ್ತಿ ತನ್ನೊಳಗಿನ ಭಯ-ಕಾತರತೆಗಳ ಮಧ್ಯೆ ತೂಗಾಡುವ ಸ್ಥಿತಿಯನ್ನು ಈ ಕಾದಂಬರಿ ಚಿತ್ರಿಸುತ್ತದೆ. ದಿ ವಿಕ್ಟಿಮ್ (1948) ಇವನ ಎರಡನೆಯ ಕಾದಂಬರಿ. ಯುದ್ಧ ಸಮಯದಲ್ಲಿ ಸೈನ್ಯಕ್ಕೆ ಸೇರಲು ಕಡ್ಡಾಯ ಕರೆ ಬರುವುದನ್ನು ಕಯುತ್ತಿರುವ ತರುಣನ ಆತಂಕವನ್ನು ಇದು ನಿರೂಪಿಸುತ್ತದೆ. ಇದರಲ್ಲಿ ನಾಯಕನಾದವ ಅಪರಾಧ ಮನೋಭಾವ ತನ್ನೊಳಗೇ ಇದ್ದರೂ ಅದನ್ನು ತಡವಾಗಿ ಗುರುತಿಸುವ ಚಿತ್ರಣ ಮೂಡಿಬಂದಿದೆ.  

	ಕೆಲಕಾಲ ಯೂರೋಪಿನಲ್ಲಿದ್ದ ಅಲ್ಲಿ ಹಾಸ್ಯ ಬೆರೆತ ಕಾದಂಬರಿ ದ ಅಡ್ವೆಂಚರ್ಸ್ ಆಫ್ ಆಗಿ ಮಾರ್ಚ್ ಅನ್ನು ಬರೆದ (1953). ಷಿಕಾಗೊದಲ್ಲಿ ಒಂದು ಯಹೂದ್ಯ ಕುಟುಂಬದ ಬದುಕನ್ನು ಚಿತ್ರಿಸುತ್ತಲೇ, ಕಾದಂಬರಿ ಒಬ್ಬ ತರುಣ ತಾನು ಯಾರು ಎಂದು ಕಂಡುಕೊಳ್ಳಲು ಮಾಡುವ ಪ್ರಯತ್ನವನ್ನು ನಿರೂಪಿಸುತ್ತದೆ. ಈ ಕಾದಂಬರಿಗೆ ನ್ಯಾಷನಲ್ ಬುಕ್ ಅವಾರ್ಡ್  ದೊರಕಿತು. 1970 ರಲ್ಲಿ ಪ್ರಕಟವಾದ  ಮಿ. ಸ್ಯಾಮಲರ್ಸ್ ಪ್ಲಾನೆಟ್ ಕಾದಂಬರಿಯೂ ನ್ಯಾಷನಲ್ ಅವಾರ್ಡನ್ನು  ಗೆದ್ದುಕೊಂಡಿತು, 1976 ರಲ್ಲಿ ಹಂಬೋಲ್ಟಸ್ ಗಿಫ್ಟ್ ಕಾದಂಬರಿಗೆ ಪುಲಿಟ್‍ಜóರ್ ಪ್ರಶಸ್ತಿ ಬಂದಿತು. ಹೆರ್‍ಜೋಗ್ (1964) ಈತನ ಯಶಸ್ವಿ ಕಾದಂಬರಿ. ಕಾತರಕ್ಕೊಳಗಾದ ನಾಯಕನೊಬ್ಬ ತನ್ನ ಪರಲೌಕಿಕ ನಿಲುವನ್ನು ಸ್ಪಷ್ಟಪಡಿಸುವ ಪ್ರಯತ್ನ ಇಲ್ಲಿ ಕಾಣಬಹುದು. ಆಸ್ತಿತ್ವವಾದದ ಬೆಳಕಿನಲ್ಲಿ ಆಧುನಿಕ ಅಮೆರಿಕೆಯ ವ್ಯಕ್ತಿ ಧರ್ಮಸಂಕಟವನ್ನು ತೋಡಿಕೊಳ್ಳುವುದೇ ಬೆಲೊನ ಎಲ್ಲ ಕಾದಂಬರಿಗಳ ಜಾಯಮಾನ. ದಿ ಅಡ್ವೆಂಚರ್ಸ್ ಆಫ್ ಆಗಿ ಮಾರ್ಚ್ (1953), ಸೀಜ್ ದಿಡೇ (1956), ಹೆಂಡರ್ಸ್‍ನ್ ದಿ ರೇಯ್ನ ಕಿಂಗ್ (1959)-ಎಂಬುವು ಈತನ ಕೃತಿಗಳು. 
												(ಕೆ.ಬಿ.ಪಿ.) 
	ಪರಿಷ್ಕರಣೆ
	ಪ್ರೊ. ಎಲ್. ಎಸ್. ಶೇಷಗಿರಿರಾವ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ